ಮೃದುಚಾಲಕ - 
	ಪರಸ್ಪರ ಸಂಪರ್ಕದಲ್ಲಿರುವ ಎರಡು ಚಲನಶೀಲವಸ್ತುಗಳ ನಡುವೆ ವರ್ತಿಸುವ ಘರ್ಷಣಬಲವನ್ನು ಕನಿಷ್ಠಗೊಳಿಸುವ ಪದಾರ್ಥ (ಲ್ಯೂಬ್ರಿಕೆಂಟ್). ಇದರ ಬಳಕೆಯಿಂದ ಮೃದುಚಾಲನೆ (ಲ್ಯೂಬ್ರಿಕೇಶನ್) ಒದಗುತ್ತದೆ. ಯಾವುದೇ ಯಂತ್ರದಲ್ಲಿ ಘರ್ಷಣಜನ್ಯಬಲಗಳು ಅದರ ತೇವಮಾನಕ್ಕೆ ಕಾರಣವಾಗುತ್ತವೆ. ಇವನ್ನು ಕನಿಷ್ಠಮಿತಿಯಲ್ಲಿಡುವುದೇ ಮೃದುಚಾಲಕದ ಕ್ರಿಯೆ. ಪೂರ್ತಿನಿವಾರಣೆ ಅಸಾಧ್ಯ.

	ಚಲಿಸುತ್ತಿರುವ ಎರಡು ಭಾಗಗಳ ಸಂಧಿಸ್ಥಳ ಒರಟಾಗಿದ್ದರೆ ಮೇಲ್ಮೈಯಿಂದ ಚಾಚಿರುವ ಉಬ್ಬುಗಳು ಒಂದನ್ನೊಂದು ಉಜ್ಜಿ ಘರ್ಷಣೆ ಉಂಟಾಗುತ್ತದೆ. ಉಜ್ಜುತ್ತಿರುವ ಎರಡು ಭಾಗಗಳ ಮೇಲ್ಮೈ ಅತಿ ನುಣುಪಾಗಿರುವುದೂ ಒಳ್ಳೆಯದಲ್ಲ. ಏಕೆಂದರೆ ಮೇಲ್ಮೈಯಲ್ಲಿ ಉಬ್ಬುತಗ್ಗುಗಳಿರುವಾಗ ತಗ್ಗುಗಳಲ್ಲಿ ವಾಯು ಸೇರಿಕೊಂಡು ಎರಡು ಭಾಗಗಳನ್ನು ಬೇರ್ಪಡಿಸಿರುತ್ತದೆ. ಹೀಗಲ್ಲದೆ ಮೇಲ್ಮೈ ನಯವಾಗಿರುವಾಗ ಎರಡು ಭಾಗಗಳೂ ಪೂರ್ತಿಯಾಗಿ ಒಂದನ್ನೊಂದು ಒತ್ತುತ್ತೆ ಉಜ್ಜುತ್ತವೆ. ಇದರಿಂದ ಹೆಚ್ಚಿನ ಘರ್ಷಣೆ ಏರ್ಪಡುತ್ತದೆ. ಅಲ್ಲದೆ ಉಜ್ಜುತ್ತಿರುವ ಭಾಗಗಳ ಕಣಗಳು ಒಂದನ್ನೊಂದು ಸೆಳೆದುಕೊಂಡು ಎರಡೂ ಭಾಗಗಳು ಅಂಟಿಕೊಂಡು ಚಲನೆ ನಿಲ್ಲುವ ಸಂದರ್ಭವೂ ಬರಬಹುದು. ಈ ತೊಂದರೆಗಳನ್ನು ನಿವಾರಿಸಬೇಕಾದರೆ ಅವೆರಡರ ಮಧ್ಯೆ ಮೃದುವಾದ ಮತ್ತು ಘರ್ಷಣ ನಿವಾರಕವಾದ ತೆಳುಪೊರೆಯನ್ನು ನಿರ್ಮಿಸಬೇಕು. ಆಗ ಘನವಸ್ತುಗಳ ನಡುವಿನ ಘರ್ಷಣೆ ತಪ್ಪಿ ಮೃದುವಸ್ತುಗಳಿಂದ ಉತ್ಪನ್ನವಾದ ಘರ್ಷಣೆ ಮಾತ್ರ ಇರುತ್ತದೆ. ಘರ್ಷಣನಿವಾರಕದ ಸೂಕ್ಷ್ಮಪೊರೆ ಹರಿಯದೇ ಅಥವಾ ಮುರಿಯದೇ ಇರುವ ತನಕವೂ ಘರ್ಷಣೆ ಇಲ್ಲವೆಂದೇ ಅನ್ನುವಷ್ಟು ಕಡಿಮೆ ಆಗಿರುತ್ತದೆ. ಘರ್ಷಣನಿವಾರಕ ಅತಿ ತೆಳುವಾಗಿದ್ದರೆ, ಅದು ಸ್ಥಳದಿಂದ ಹೊರಗೆ ನೂಕಲ್ಪಟ್ಟು, ಘರ್ಷಣೆಯಿಂದಾಗುವ ನಾಶ ಪುನಃ ಪ್ರಾರಂಭವಾಗುತ್ತದೆ. ಆದ್ದರಿಂದ ಘರ್ಷಣನಿವಾರಕ ಅತಿ ಗಡುಸಾಗಿಯೂ ಇರಕೂಡದು ಅತಿ ತೆಳುವಾಗಿಯೂ ಇರಕೂಡದು.

	ಘರ್ಷಣದಿಂದ ಉತ್ಪತ್ತಿಯಾಗುವ ಉಷ್ಣದಿಂದ ಘರ್ಷಣನಿವಾರಕ ತೆಳುವಾಗುವುದೆಂಬ ವಿಷಯವೂ ಘರ್ಷಣನಿವಾರಕವನ್ನು ಪ್ರಯೋಗಿಸುವ ಸ್ಥಳದಲ್ಲಿರುವ ಒತ್ತಡ ಮತ್ತು ಯಂತ್ರದ ಚಲನೆಯ ವೇಗಗಳೂ ಘರ್ಷಣಪ್ರಮಾಣದ ಮೇಲೆ ಪರಿಣಾಮವನ್ನು ಉಂಟುಮಾಡುವುವೆಂಬ ವಿಷಯವೂ ಈ ಸಂದರ್ಭದಲ್ಲಿ ತಿಳಿದಿರಬೇಕಾದ ಸಂಗತಿಗಳು. ಈ ಗುಣಗಳನ್ನು ಹೊಂದಿರುವ ಘರ್ಷಣನಿವಾರಕಗಳೆಂದರೆ ಮುಖ್ಯವಾಗಿ ಕೆಲವು ತರಹದ ಎಣ್ಣೆಗಳು, ತಮ್ಮ ಸ್ಥಳದಲ್ಲಿಯೇ ನಿಂತಿರುವಷ್ಟು ಶ್ಯಾನತ್ವ (ವಿಸ್ಕಾಸಿಟಿ) ಇವುಗಳಿಗೆ ಇರಬೇಕು. ಆದರೆ ಈ ಎಣ್ಣೆಗಳಲ್ಲಿ ತಮ್ಮ ಕಣಗಳಲ್ಲೇ ಉಂಟಾಗುವ ಆಂತರಿಕ ಘರ್ಷಣೆ ಅತ್ಯಲ್ಪವಾಗಿರಬೇಕು. ಅಲ್ಲದೇ ಈ ಎಣ್ಣೆಗಳ ಉತ್ಕರ್ಷಣೆ (ಆಕ್ಸಿಡೇಶನ್) ತಪ್ಪಿಸಲ್ಪಟ್ಟಿರಬೇಕು. ಹಂದಿಕೊಬ್ಬಿನ ಎಣ್ಣೆ, ತಿಮಿಂಗಿಲಕೊಬ್ಬು, ಬೀಜದ ಎಣ್ಣೆ, ಮೀನಿನ ಎಣ್ಣೆ, ದನ ಕುರಿಗಳ ಕೊಬ್ಬು ಮುಂತಾದವು ಉತ್ತಮ ಮೃದುಚಾಲಕಗಳು. ಇವೆಲ್ಲವೂ ಪ್ರಾಣಿಜನ್ಯ, ಇಷ್ಟು ಉತ್ತಮಬಲ್ಲದವು ಸಸ್ಯಜನ್ಯ ಮೃದುಚಾಲಕಗಳು: ಹರಳೆಣ್ಣೆ, ಹಿಪ್ಪೆ ಎಣ್ಣೆ, ರೆಪ್ ಎಣ್ಣೆ ಇತ್ಯಾದಿ. ಖನಿಜ ತೈಲಗಳು ಘರ್ಷಣ ನಿವಾರಣೆಗೆ ಹೆಚ್ಚು ಸಹಾಯಕಗಳಲ್ಲ.

	ವಾಸ್ತವವಾಗಿ ಯಾವ ಒಂದು ಎಣ್ಣೆಯಲ್ಲಿಯೂ ಎಲ್ಲ ಗುಣಗಳೂ ಸಮಾವೇಶಗೊಂಡಿರುವುದಿಲ್ಲ. ಪ್ರಾಣಿಜನ್ಯ ಮತ್ತು ಸಸ್ಯಜನ್ಯ ಎಣ್ಣೆಗಳು ಯಂತ್ರಗಳಲ್ಲಿ ಉತ್ಪನ್ನವಾಗುವ ಉಷ್ಣದಿಂದ ಹುಳಿತುಕೊಳೆತು ಹೋಗುವುವು. ಆಗ ಉತ್ಪತ್ತಿಯಾದ ಆಮ್ಲದಿಂದ ಯಂತ್ರದ ಭಾಗಗಳು ನಶಿಸಲಾರಂಭಿಸುವುವು. ಖನಿಜ ತೈಲಗಳು ಉಷ್ಣದಿಂದ ಕೆಟ್ಟುಹೋಗದೇ ಇದ್ದರೂ ಅಷ್ಟಾಗಿ ಘರ್ಷಣನಿವಾರಕ ಗುಣಗಳನ್ನು ಹೊಂದಿರುವುದಿಲ್ಲ. ಈ ಎಣ್ಣೆಗಳನ್ನು ಯುಕ್ತಪ್ರಮಾಣಗಳಲ್ಲಿ ಬೆರೆಸಿ ಉಪಯೋಗಿಸುವುದೇ ಸಮಸ್ಯೆಗೆ ಪರಿಹಾರ.

	ಮೃದುಚಾಲನೆಯ ವಿಧಾನಗಳು: 1 ಸ್ವಯಂಚಾಲಿತ ಮೃದುಚಾಲನೆ, 2 ನಿಯತಕಾಲಿಕ ಮೃದುಚಾಲನೆ, 3 ಮುಳುಗು ಮೃದುಚಾಲನೆ, (ಬಾತ್ ಲ್ಯೂಬ್ರಿಕೇಶನ್), 4 ಎರಚು ಮೃದುಚಾಲನೆ (ಸ್ಪ್ಲ್ಯಾಶ್ ಲ್ಯೂಬ್ರಿಕೇಶನ್), 5 ಬಲವತ್ ಮೃದುಚಾಲನೆ (ಫೋಸ್ರ್ಡಾ ಲ್ಯೂಬ್ರಿಕೇಶನ್).

	1 ಸ್ವಯಂಚಾಲಿತ ಮೃದುಚಾಲನೆ: ಈ ವಿಧಾನದಲ್ಲಿ ಯಂತ್ರಕಾಂಡದ ಚಲನೆ ನಿಶ್ಚಲನೆಯೊಂದಿಗೆ ಮೃದುಚಾಲಕದ ಪ್ರಸರಣೆ ಅಪ್ರಸರಣೆ ಹೊಂದಿಕೊಂಡಿರುವುವು. ಅಂದರೆ ಯುಕ್ತಕಾಲದಲ್ಲಿ ಮಾತ್ರ ಘರ್ಷಣನಿವಾರಣೆ ಜಾರಿಯಲ್ಲಿರುತ್ತದೆ.

	2 ನಿಯತಕಾಲಿಕ ಮೃದುಚಾಲನೆ: ಯಂತ್ರದ ಚಲನೆಗೂ ಮೃದುಚಾಲಕದ ಪ್ರಯೋಗಕ್ಕೂ ಇಲ್ಲಿ ನೇರ ಸಂಬಂಧವಿರುವುದಿಲ್ಲ. ಬತ್ತಿಯಿಂದ ಮೃದು ಚಾಲನವನ್ನು ಎರೆಯುವುದು, ಚರಬಿ ತುಪಾಕಿ ಹಾರಿಸುವುದು, ಯಂತ್ರದ ಹೊರಗಿರುವ ರೇಚಕಗಳ ಮೂಲಕ ಮೃದುಚಾಲಕಗಳನ್ನು ಒದಗಿಸುವುದು ಇವು-ಈ ವಿಧಾನದ ಮಾದರಿಗಳು. ಇಲ್ಲಿ ಮೃದುಚಾಲಕ ಕೊಳಕ್ಕೆ ಮರಳುವುದಿಲ್ಲವಾದ್ದರಿಂದ ಎಣ್ಣೆಯ ಕೊಳವನ್ನು ಆಗಾಗ ತುಂಬುತ್ತಲೇ ಇರಬೇಕು.

	3 ಮುಳುಗು ಮೃದುಚಾಲನೆ: ಎಣ್ಣೆ ಬೇಕಾದ ಧಾರಕ (ಬೇರಿಂಗ್) ಮುಂತಾದ ಭಾಗಗಳು ಯಾವಾಗಲೂ ಎಣ್ಣೆಯಲ್ಲಿ ಅದ್ದಿಯೇ ಇರುವುದರಿಂದ ಮೃದುಚಾಲಕದ ಕೊರತೆ ಇರುವುದಿಲ್ಲ. ಎಣ್ಣೆ ಸೋರಿಹೋಗದೇ ಇರಲು ತಕ್ಕ ಎಚ್ಚರಿಕೆ ಮಾತ್ರ ವಹಿಸಿರಬೇಕು.

	4 ಎರಚು ಮೃದುಚಾಲನೆ: ಚಲಿಸುತ್ತಿರುವ ಯಂತ್ರದ ಒಂದು ಭಾಗ ಎಣ್ಣೆಯ ಕೊಳದ ಮೂಲಕ ವೇಗವಾಗಿ ಓಡಿ ಎಣ್ಣೆಯನ್ನು ಸಿಡಿಸುವುದು. ವಕ್ರ ದಂಡಗಳಿಂದ ಚಾಲಿತವಾದ ಯಂತ್ರಗಳಲ್ಲಿ ಈ ವಿಧಾನ ಸಾಮಾನ್ಯವಾಗಿ ಬಳಕೆಯಲ್ಲಿರುತ್ತದೆ. ಸಂಯೋಜಕದಂಡದ ಕೆಳಭಾಗ ಎಣ್ಣೆಯಲ್ಲಿ ಚಲಿಸುತ್ತ ಎಣ್ಣೆಯನ್ನು ಎರಚಾಡಿ ಘರ್ಷಣೆಯನ್ನು ನಿವಾರಿಸುವುದು. ಈ ವಿಧಾನದಲ್ಲಿ ಅದೇ ಎಣ್ಣೆ ಮತ್ತೆ ಮತ್ತೆ ಉಪಯೋಗಕ್ಕೆ ಬರುತ್ತದೆ.

	5 ಬಲವತ್ ಮೃದುಚಾಲನೆ : ರೇಚಕದಿಂದ ಉತ್ಪನ್ನವಾದ ಒತ್ತಡದಿಂದ ಮೃದುಚಾಲಕ ಎಣ್ಣೆಯನ್ನು ಬೇರೆ ಬೇರೆ ಭಾಗಗಳಿಗೆ ಕಳುಹಿಸಲಾಗುವುದು. ಇದು ತಪ್ಪದೇ ಮೃದುಚಾಲನೆಯನ್ನು ಉಂಟುಮಾಡುವ ವಿಧಾನ.
(ವೈ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ